ಅಗಸ್ಟ ಕಾಂಟ್ ( ) (19 ಜನವರಿ 1798 – 5 ಸೆಪ್ಟೆಂಬರ್ 1857), ಹೆಸರಾಂತ ಸಮಾಜಶಾಸ್ತ್ರಜ್ಞ. == ಜನನ ಮತ್ತು ಬಾಲ್ಯ == 1798ರಲ್ಲಿ ಫ್ರಾನ್ಸ್ ದೇಶದ ಮಾಂಟ್ ಪೆಲಿಯರ್ ಎಂಬ ಸ್ಥಳದಲ್ಲಿ ಜನಿಸಿದ. ಇವನ ತಂದೆ-ತಾಯಿ ರೋಮನ್ ಕೆಥೊಲಿಕ್ ಧರ್ಮಕ್ಕೆ ಸೇರಿದವರು. ಚಿಕ್ಕವಯಸ್ಸಿನಿಂದಲೂ ಈತ ಮೇಧಾವಿ, ವಾದಚತುರ, ಪ್ರತಿಭಾವಂತ, ಚುರುಕು ಬುದ್ಧಿಯವ, ಜ್ಞಾನಾರ್ಜನೆಯಲ್ಲಿಯೂ, ಓದಿದ್ದನ್ನು ಗ್ರಹಿಸುವುದರಲ್ಲಿಯೂ, ಇತರರಿಗೆ ಮೇಲ್ಪಂಕ್ತಿಯಾಗಿದ್ದ. ಹದಿನಾರನೆಯ ವಯಸ್ಸಿನಲ್ಲಿಯೇ ಗಣಿತಶಾಸ್ತ್ರವನ್ನು ಅಧ್ಯಯನ ಮಾಡುವುದರಲ್ಲಿ ಹೆಚ್ಚಿನ ಕಾಲವನ್ನು ಉಪಯೋಗಿಸತೊಡಗಿದ. ಬಾಲ್ಯದಲ್ಲಿಯೇ ತನ್ನ ಉಪಾಧ್ಯಾಯನೊಬ್ಬನ ಜೊತೆಯಲ್ಲಿ ವಾದ ಮಾಡಿ ಗೆದ್ದ. ನೆಪೋಲಿಯನ್ನನಂಥ ಪರಾಕ್ರಮಿಯನ್ನೂ ಈತ ಟೀಕಿಸದೆ ಬಿಡಲಿಲ್ಲ. ಸ್ವಮತೀಯರಲ್ಲಿ ಇವನಿಗೆ ಅಷ್ಟೇನೂ ಗೌರವವಿರಲಿಲ್ಲ. ಆಗಷ್ಟ್ ಕಾಮ್ಟೆ ತನ್ನ 19ನೆಯ ವಯಸ್ಸಿನಲ್ಲಿಯೇ ಸೇಂಟ್ ಸೈಮನ್ ಎಂಬ ಸಮಾಜ ಸ್ವಾಮ್ಯವಾದಿಯ ಪರಿಚಯವಾಗಿ ಮನಸ್ಸಿನ ಪರಿವರ್ತನೆಯಾಯಿತು. ಅನಂತರ ಆತ ಸಮಾಜವಿಜ್ಞಾನ ಮತ್ತು ಸಾಮಾಜಿಕ ಸಂಘಗಳ ಉತ್ಕೃಷ್ಟ ರೀತಿಯ ಅಧ್ಯಯನವನ್ನು ನಡೆಸಿದ. == ಜೀವನ == ಕಾಂಟ್ 1822ರಲ್ಲಿ ಎ ಪ್ರಾಸ್ಪೆಕ್ಟಸ್ ಆಫ್ ದಿ ಸೈಂಟಿಫಿಕ್ ವರ್ಕ್ಸ ರಿಕ್ವೈರ್ಡ್ ಫಾರ್ ದಿ ರಿ ಆರ್ಗನೈಸೇಷನ್ ಆಫ್ ದಿ ಸೊಸೈಟಿ ಎಂಬ ಗ್ರಂಥವನ್ನು ಪ್ರಕಟಿಸಿದ. ಈ ಪ್ರಕಟಣೆಯಿಂದ ಕಾಂಟನ ಜೀವನದ ಮೇಲೆ ಮಹತ್ಪರಿಣಾಮವಾಯಿತು. ಅಲ್ಲಿಂದಾಚೆ ದೀರ್ಘವಾಗಿ ಆಲೋಚನೆ ಮಾಡಿ ವಿಷಯಗ್ರಹಣ ಮಾಡಲು ಆತ ಪ್ರಾರಂಭಿಸಿದ. ಈ ಮಧ್ಯೆ ಮದುವೆ ಮಾಡಿಕೊಂಡ. ತನ್ನ ಪುಸ್ತಕದ ಪ್ರಕಟಣೆಗೆ ಯಥಾಶಕ್ತಿ ದುಡಿದಿದ್ದರಿಂದಲೂ ಸಂಸಾರದಲ್ಲಿ ಹೆಚ್ಚಿನ ಹೊಂದಾಣಿಕೆ ಇಲ್ಲದ್ದರಿಂದಲೂ ಅವನ ಮನೋರೋಗ ಪ್ರಬಲವಾಯಿತು. ಅದೇ ಕಾಲದಲ್ಲಿ ಸಾರ್ವಜನಿಕರಿಗಾಗಿ ಪ್ರತಿಮಾನವನೂ ಸತತವೂ ದುಡಿಯಬೇಕೆಂಬ ಧ್ಯೇಯವನ್ನೊಳಗೊಂಡ ಹಲವಾರು ಭಾಷಣಗಳನ್ನು ಮಾಡಿದ. ಈತ ತನ್ನ ಪುಸ್ತಕಗಳಿಂದ ಬರುತ್ತಿದ್ದ ಸಂಭಾವನೆಯನ್ನು ಸ್ವೀಕರಿಸುತ್ತಿರಲಿಲ್ಲವಾಗಿ ಕೊನೆಗಾಲದವರೆಗೂ ಬಡವನಾಗಿಯೇ ಇರಬೇಕಾಯಿತು. ಸನ್ಮಿತ್ರರು ಅವನಿಗೆ ಆಗಾಗ ಹಣವನ್ನು ಕೊಟ್ಟು ಅವನ ಜೀವನಕ್ಕೆ ನೆರವಾಗುತ್ತಿದ್ದರು. ಕಾಂಟನ ಜ್ಞಾಪಕಶಕ್ತಿ ಆತ ಬರೆದ ಎಲ್ಲ ಗ್ರಂಥಗಳಲ್ಲಿಯೂ ವಿಷಯಗಳನ್ನು ಶಾಸ್ತ್ರೋಕ್ತವಾಗಿ ಚಿತ್ರಿಸಲು ಅನುಕೂಲವಾಯಿತು. ಇದರಿಂದಲೇ ಆತ ಮಹಾಜ್ಞಾನಿಯಾಗಲು ಸಾಧ್ಯವಾಯಿತೆಂದು ಅನೇಕ ತಜ್ಞರ ಅಭಿಪ್ರಾಯ. ಪಾಸಿಟಿವ್ ಫಿಲಾಸಫಿ (ಲೋಕಸಿದ್ಧವಾದ, ಪ್ರತ್ಯಕ್ಷ ಪ್ರಮಾಣವಾದ) ಮತ್ತು ಪಾಸಿಟಿವ್ ಪಾಲಿಟಿ (ಲೋಕಸಿದ್ಧ ಆಡಳಿತವಿಧಾನ) ಎಂಬ ಗ್ರಂಥಗಳನ್ನು ಬರೆದು ಕಾಂಟ್ ಜಗತ್ಪ್ರಸಿದ್ಧ ನಾದ. 1830 - 42ರವರೆಗೆ ಪಾಸಿಟಿವ್ ಫಿಲಾಸಫಿಯ ಆರು ಸಂಕ್ಷಿಪ್ತ ಸಂಪುಟಗಳನ್ನು ಪ್ರಕಟಿಸಿದ. ಹೀಗೆಯೇ ಪಾಸಿಟಿವ್ ಪಾಲಿಟಿಯ ನಾಲ್ಕು ಸಂಕ್ಷಿಪ್ತ ಸಂಪುಟಗಳನ್ನು 1851 - 54ರೊಳಗೆ ಪ್ರಕಟಿಸಿದ. ಕಾಂಟನ ಮೇಧಾಶಕ್ತಿಯನ್ನು ಜಾನ್ ಸ್ಟುಅರ್ಟಮಿಲ್ ಮಿಗಿಲಾಗಿ ಕೊಂಡಾಡಿ, ಪ್ರಪಂಚದ ಮೇಧಾವಿಗಳಲ್ಲಿ ಅಗ್ರಗಣ್ಯನೆಂದು ಸಾರಿದ್ದಾನೆ. ಜಾರ್ಜ್ ಹೆನ್ರಿ ಲೂಯಿಸ್ ಎಂಬ ವಿದ್ವಾಂಸ ಆಧುನಿಕ ಸಮಾಜದ ಮಾರ್ಗದರ್ಶಕನೆಂದು ಹೇಳಿದ್ದಾನೆ. ಜಾನ್ಮಾರ್ಲೆ ಎಂಬ ಇಂಗ್ಲೆಂಡ್ ದೇಶದ ರಾಜಕಾರಣಿ, ಕಾಂಟನಂಥ ಮೇಧಾವಿಯನ್ನು ಸರಿದೂಗುವ ಸಮಾಜಶಾಸ್ತ್ರಜ್ಞನೇ ಇಲ್ಲವೆಂದು ಅಭಿಪ್ರಾಯ ಪಟ್ಟಿದ್ದಾನೆ. ಮಾನವ ಬಹುದೇವತಾರಾಧನೆಯನ್ನುಳಿದು ಕ್ರಮೇಣ ಹೇಗೆ ಏಕದೇವೋಪಾಸಕನಾದ ನೆಂಬುದನ್ನು ತನ್ನ ಗ್ರಂಥಗಳಲ್ಲಿ ಕಾಂಟ್ ವಿವರಿಸಿದ್ದಾನೆ. ಕಾಲಕ್ರಮೇಣ ಮನುಷ್ಯನ ಬುದ್ಧಿಶಕ್ತಿ ಚುರುಕುಗೊಂಡು ಅನೇಕ ದೇವತಾರಾಧನೆ ಸುವ್ಯವಸ್ಥಿತ ಮಾರ್ಗವಲ್ಲವೆಂದು ಮನುಷ್ಯ ಮನಗಂಡನೆಂದೂ ಅನಂತರ ಏಕದೇವತಾವಾದವನ್ನು ಅವಲಂಬಿಸಿದನೆಂದೂ ಪ್ರತಿಪಾದಿಸಿದ್ದಾನೆ. ಆಮೇಲೆ ದೇವರು ಮನಸ್ಸಿನ ಹಿಂದಿರುವ ಒಂದು ಶಕ್ತಿಯೆಂದು ದೃಢಪಡಿಸಿ ವಾಸ್ತವಾಂಶಗಳನ್ನೂ ಗೋಚರಸಾಧ್ಯ ವಿಷಯಗಳನ್ನೂ ಮಾತ್ರ ಅಂಗೀಕರಿಸುವ ಮಾನವೋತ್ತಮತಾವಾದವನ್ನು ಮಂಡಿಸಿದ್ದಾನೆ. ಕಾಂಪ್ಟ್ ನ ಕೊಡುಗೆಗಳು : 1.ಅಗಸ್ಟ್ ಕಾಂಟ್ ತಮ್ಮ" ಪಾಸಿಟಿವ್ ಫಿಲಾಸಫಿ" ಎಂಬ ಕೃತಿಯ ಮೂಲಕ "ಸೋಶಿಯಾಲಜಿ "ಎಂಬ ಪದವನ್ನು 1839ರಲ್ಲಿ ಪರಿಚಯಿಸಿದರು. 2. ಪ್ರಾಕೃತಿಕ ವಿಜ್ಞಾನಗಳು ಭೌತಿಕ ಜಗತ್ತಿನ ಸೂತ್ರ ವಿವರಿಸುವಂತೆ ಸಮಾಜ ವಿಜ್ಞಾನವು ಸಾಮಾಜಿಕ ಜಗತ್ತಿನ ಸೂತ್ರಗಳನ್ನು ವಿವರಿಸಿ ಬೇಕೆಂದು ಅವರ ಇಚ್ಛೆಯಾಗಿತ್ತು . 3. ಸಮಾಜದ ಅಧ್ಯಯನದಲ್ಲಿ ವಸ್ತುನಿಷ್ಠವಾದ ವೈಜ್ಞಾನಿಕ ವಿಧಾನದ ಅವಶ್ಯಕತೆಗೆ ಕಾಂಟ್ ರವರು ಒತ್ತನ್ನು ನೀಡಿದರು. 4. ಸಮಾಜವನ್ನು ಉತ್ತಮಪಡಿಸುವುದಕ್ಕೆ ಸಮಾಜದ ತತ್ವಧಾರಿತ ವಿಜ್ಞಾನ ಹಾಗೂ ನಡಾವಳಿಯ ಕ್ರಮಬದ್ಧವಾದ ಸಂಶೋಧನೆಯ ಅವಶ್ಯಕತೆ ಇದೆ ಎಂಬುದು ಅವರ ನಂಬಿಕೆ ಯಾಗಿತ್ತು. 5. ಅಗಸ್ಟ್ ಕಾಮ್ಟ್ ಸಮಾಜಶಾಸ್ತ್ರವನ್ನು ಎರಡು ಭಾಗಗಳಾಗಿ ವಿಂಗಡಿಸಿದ್ದು ಅವುಗಳು ಯಾವುದೆಂದರೆ,(ಅ). ಸಾಮಾಜಿಕ ಸ್ಥಿತಿ ಶಾಸ್ತ್ರ , (ಆ) ಸಾಮಾಜಿಕ ಚಲನ ಶಾಸ್ತ್ರ. ಕುಟುಂಬ ,ಅರ್ಥವ್ಯವಸ್ಥೆ, ಧರ್ಮ, ಇನ್ನೂ ಮುಂತಾದ ಪ್ರಮುಖ ಸಂಸ್ಥೆಗಳ ಅಧ್ಯಯನಕ್ಕೆ"ಸಾಮಾಜಿಕ ಸ್ಥಿತಿ ಶಾಸ್ತ್ರ" ಸಂಬಂಧಿಸಿದ್ದರೆ, ಸಾಮಾಜಿಕ ಬದಲಾವಣೆ ಹಾಗೂ ಸಾಮಾಜಿಕ ಪ್ರಗತಿಗೆ "ಸಾಮಾಜಿಕ ಚಲನ ಶಾಸ್ತ್ರ" ಸಂಬಂಧಿಸಿದೆ. ಕೊಡುಗೆಗಳು === ಕೊಡುಗೆ === == ಬಾಹ್ಯ == == ಉಲ್ಲೇಖಗಳು == == ಸಂಪರ್ಕಗಳು == ಅಗಸ್ಟ ಕಾಂಟ್